Wednesday, 30 December 2015

ಸ್ವಾರ್ಥ ದಕ್ಕುವುದು

16.ಜಗದ ದಶದಿಕ್ಕುಗಳಲಿ ಸ್ವಾರ್ಥದ ನಿನಾದವಡಗಿದೆ
ಸರ್ವರ ಮನದಲ್ಲೂ ಸ್ವಾರ್ಥದ ಸೊಲ್ಲಡಗಿದೆ
ಸ್ವಾರ್ಥದ ಹಂಬಲವಿದೆ ಪ್ರತಿಯೊಬ್ಬನಲಿ ಓ ಗೆಳೆಯ
ಸ್ವಾರ್ಥ ದಕ್ಕುವುದು ದೈವದಲ್ಲಡಗಿದೆ !!

ಆರೋಗ್ಯವೇ ಇಲ್ಲದಿರೆ

15.ದಾನಕ್ಕೊದಗದ ಸಂಪತ್ತು ಸಂಪತ್ತೇನು
ಶತ್ರುವಿಗೆ ತಡೆಯೊಡ್ಡದ ಶಕ್ತಿ ಶಕ್ತಿಯೇನು
ಪ್ರಾಯೋಗಿಕಾವಲ್ಲದ ವಿದ್ಯೆ ನಿರುಪಯುಕ್ತ
ಆರೋಗ್ಯವೇ ಇಲ್ಲದಿರೆ ಬಂತು ಸುಖವೇನು ? !!

ಕುಲೀನನಿಂದ ಕುಲಹೀನನೆನ್ದು

14.ಹೊಳೆವ ಹರಳು ನಕ್ಷತ್ರಗಳಾಗಬಹುದೇ
ಮೋಡಗಳು ಬೆಂಕಿಯ ಮಳೆಗರಿಯಬಹುದೇ
ಕುಲೀನನಿಂದ ಕುಲಹೀನನೆನ್ದು ಜನಿಸನು
ಚಿಪ್ಪಿನಿಂದ ಗೆಡ್ಡೆಗೆಣಸು ಹೊರಬರಹುದೇ !!

ಮಾನವನ ಬದುಕು

13.ಅನುವಂಶೀಯ ದೋಷವೋ, ಸ್ವಭಾವದ ತಪ್ಪೋ
ಇಲ್ಲವೇ ವಿಷಗಳಿಗೆಯ ವಿಷಮ ಪರಿಸರದ್ದೋ
ಈ ಮೂರರಲ್ಲಿಯೇ ಅಡಗಿದೆ ಮಾನವನ ಬದುಕು
ಕೆದಕಿದ್ದಾರೆ ಕೆಡಕು, ಒಳಿತಿದ್ದರೆ ಒಳಿತು !!

ಒಳಿತು-ಕೆಡಕುಗಳ

ಒಳಿತು-ಕೆಡಕುಗಳ ಪರಕಿಸುವನು ಜಾಣ
ಭೇದ ಇವುಗಳನೆಂತು ಪೇಳುವನು ಕೋನ
ಓ ಗೆಳೆಯನೇ ! ಬೆಕ್ಕಿನಲ್ಲಿ ಎಲ್ಲಿಹುದು ಹಂಸದ ಹಿರಿಮೆ
ನೀರನ್ನು - ಹಾಲನ್ನು ಬೇರ್ಪಡಿಸುವ ಗುಣ ||

ಸುಗುಣನೂ ಸಹ

10. ದುರ್ಜನರ ಸಹವಾಸ ಒತ್ತುವದು ಛಾಪ
ಸುಗುಣನೂ ಸಹ ಅವಗುಣನು ಆಗುವನು ಪಾಪ
ಬೆರೆಯಲು ಸಾಗರಕೆ ಉಪ್ಪು ನೀರಾಗುವದು
ಕಳೆದುಕೊಳ್ಳುವಳು ಗಂಗೆ ತನ್ನ ನಿಜ ರೂಪ ||

Tuesday, 29 December 2015

ಹಣದ ಬಲ ಉಳ್ಳವಗೆ

9. ಹಣದ ಬಲ ಉಳ್ಳವಗೆ ಸಕಲ ಸಮ್ಮಾನ
ಹಣದ ಬಲ ಇಲ್ಲದವಗೆ ಎಲ್ಲೆಡೆ ಅವಮಾನ
ಸಕಲವೂ ಇದ್ದು ನಿನ್ನಲಿ ಧನವಿಲ್ಲದಿರೆ
ನೀ ಏನಾಗಿದ್ದಡೇನು ? ಇನ್ನೆಲ್ಲಿಯ ಸ್ಥಾನ-ಮಾನ ||

ಯಾವಾಗ ಬಿಡುವು ಪಡೆಯಿತೋ

5. ಬದುಕಿನ ಕೆಲವು ಆಗು ಹೋಗುಗಳ ಅರಿಯಲಾಗಲಿಲ್ಲ
ನೀರ್ಗುಳ್ಳೆಯ ಆಯುವಿನಂತೆ ತಿಳಿಯಲಾಗಲಿಲ್ಲ
ಯೌವನವು ಆವರಿಸಿದ ಗಳಿಗೆ ಇನ್ನೂ ನೆನಪಿದೆ
ಯಾವಾಗ ಬಿಡುವು ಪಡೆಯಿತೋ ಅದು ತಿಳಿಯಲಾಗಲಿಲ್ಲ ||

6. ದುರ್ಜನರ ಸಹವಾಸದಲಿ ಎಚ್ಚರವಿರಲಿ
ಸಮಭಾವವಿರಲಿ ಗೆಳೆತನದ ಅಪ್ಪುಗೆಯಲಿ
ನೋಡು, ವಿಚಾರಿಸು ಜಿಹ್ವೆ ಗಾಯಗೊಳ್ಳದಂತೆ
ತಾಂಬೂಲದಲಿ ಸುಣ್ಣವು ಮೇಲುಗೈ ಪಡೆಯದಿರಲಿ ||

7. ಕೈಯಿಂದ ಜಾರಿ ಹೋಗುವುದೋ ಯಾವಾಗ ಸಂಪತ್ತು
ಅವಗಿಲ್ಲ ಈ ಜಗದಿ ಕವಡಿ ಕಿಮ್ಮತ್ತು
ಪಡೆಯುವವರಿಲ್ಲ , ಕೇಳುವವರಿಲ್ಲ ಒಬ್ಬರೂ ಅವನನ್ನು
ಪುಷ್ಪ ಕಳೆದುಕೊಂಡ ಕ್ಷಣದಿ ಕಂಪಿನ ಸೊತ್ತು ||

8. ಅಟ್ಟಹಾಸದಲಿ ನೀಚನೊಬ್ಬನು ಏರಿರಲು ಸಿಂಹಾಸನ
ಕಡಿಮೆಯಾಗುವುದೇನು ನೀತಿವಂತನ ಮಾನ ?
ಕೋತಿ ಏರಿದರೇನಂತೆ ಎತ್ತರದ ರೆಂಬೆ
ಕಡಿಮೆಯಾದೀತೆ ಹುಲಿಯ ಮಾನ-ಸಮ್ಮಾನ ||

ನನ್ನದೇ ಗುಂಗಿನಲಿ

4. ಜ್ಞಾನಿಯೋ ಅಜ್ಞಾನಿಯೋ ಏನಾದರೂ ಅನ್ನಲಿ ನನಗೆ
ಹಗಲಿರುಳು ಯೋಚಿಸುವ ಪಂಡಿತನೆನ್ನಲಿ ನನಗೆ
ನನ್ನದೇ ಗುಂಗಿನಲಿ ಇರುವೆ ನಾ ಆನಂದದಲಿ
ನನಗದರ ಗೊಡವೆ ಏಕೆ ? ಜಗವು ಏನಾದರೂ ಅನ್ನಲಿ ನನಗೆ ||

ಕರುಣೆ ಉಳ್ಳವಗೆ

3. ಋಷಿಯಾಗಿದ್ದಡೇನು,ಮಹಾಜ್ಞಾನಿಯಾಗಿದ್ದಡೇನು ?
ಅಹಂಕಾರಭರಿತ ಬದುಕು ಅವನದ್ದಾಗಿದ್ದಡೇನು
ಓ ಗೆಳೆಯನೇ ! ಕರುಣೆ ಉಳ್ಳವಗೆ ಶರಣೆಂದವನು ನಾನು
ನಿಷ್ಕರಣಿಯೋರ್ವನು ಮನ್ಮಥನ ತೆರದಿ ಕಂಗೊಳಿಸದಡೇನು ?||

ಮಣ್ಣ ಕಣ ಕಣದಲ್ಲೂ

2. ಅತ್ಯಂತ ಮಹಾನ್ ವ್ಯಕ್ತಿಯೆಂದು ಬಗೆದಿದ್ದೆ ನಿನ್ನನು
ಹೇ ಸ್ವಾಮಿ ! ಅತ್ಯಂತ ಅದ್ಭುತವಾಗಿ ಕಂಡೆನು ನಿನ್ನನು
ಹಗಲಿನಲಿ ಹುಡುಕಿದರೂ ಆವಾಸ ತಿಳಿಯಲಿಲ್ಲ
ಅಯ್ಯೋ ! ಮಣ್ಣ ಕಣ ಕಣದಲ್ಲೂ ಕಂಡೆನು ನಿನ್ನನು

Monday, 28 December 2015

ಕನ್ನಡದ ಮಧು ಬಟ್ಟಲು

1. ಮದ್ಯದಂಗಡಿಯಲಿ ಕನ್ನಡದ ಮಧು ಬಟ್ಟಲು
ಗಡಿನಾಡಿನಲಿ ವಾಸಿಸುವ ತೆಲಂಗಾಣನು ನಾನು
ಓ ಗೆಳೆಯನೇ ! ಬಹುಶಃ ಪ್ರಕೃತಿಯ ಒಪ್ಪಿಗೆಯಾದಂತೆ
ಸ್ವಭಾವಕೆ ಪ್ರತಿಯಾಗಿ ಉರ್ದುವಿನ ಉನ್ಮತ್ತನು ನಾನು ||